ಅಡಲುಗಳು
	
ಕಂಕಣಾಕೃತಿಯಲ್ಲಿದ್ದು, ತಮ್ಮ ನಡುವಿನಲ್ಲಿ ಸರೋವರವನ್ನೊಳಗೊಂಡಿರುವ ಹವಳದ ದಿಬ್ಬಗಳನ್ನು ಅಡಲುಗಳೆಂದು (ಅಟೋಲ್ಸ್) ಕರೆಯುವರು. ಹಿಂದೂ, ಪೆಸಿಫಿಕ್ ಸಾಗರಗಳ ಉಷ್ಣವಲಯದ ಪ್ರದೇಶಗಳಲ್ಲಿ ಇಂಥ ಅಡಲುಗಳಿವೆ. ಉದಾ: ಭಾರತದ ಪಶ್ಚಿಮಕ್ಕೆ ಅರಬ್ಬೀಸಮುದ್ರದಲ್ಲಿರುವ ಲಕ್ಷದೀವಿ, ಮಲದೀವಿ ದ್ವೀಪಗಳು; ಹಿಂದೂ ಸಾಗರದ ಚಾಗೋಸ್ ದ್ವೀಪ ಸಮೂಹ, ಪೆಸಿಫಿಕ್ ಸಾಗರದ ಎಲ್ಲಿಸ್, ಫಿûಜಿ ಮತ್ತು ಹವಾಯಿ ಮೊದಲಾದ ದ್ವೀಪಗಳು. ಮಲದೀವಿಗಳ ದಕ್ಷಿಣದ ತುದಿಯಲ್ಲಿರುವ ಸುವದಿವ ಜಗತ್ತಿನಲ್ಲೆಲ್ಲ ಅತಿ ದೊಡ್ಡ ಅಡಲು. ಅದರ ಸುತ್ತುವರಿಯ ದಿಬ್ಬಗಳ ನಡುವೆ ನೂರಕ್ಕೂ ಹೆಚ್ಚು ದ್ವೀಪಗಳಿವೆ. ಅಡಲುಗಳ ಅಂಚಿನ ಸುತ್ತ ತೆಂಗು ಮತ್ತು ತಾಳೆ ಮರಗಳು ಹುಲುಸಾಗಿ ಬೆಳೆದು ಕಂಗೊಳಿಸುತ್ತವೆ. 
	
ಭರತದ ವೇಳೆ ಅಡಲು ದ್ವೀಪಗಳು ಸಮುದ್ರದ ಅಲೆಗಳಡಿಯಲ್ಲಿ ಮುಳುಗಿರುವುದರಿಂದ, ನೌಕಾ ಸಂಚಾರಕ್ಕೆ ಆತಂಕವನ್ನು ಉಂಟುಮಾಡಬಲ್ಲವು. 
	
ಈ ಅಡಲುಗಳ ರಚನೆಯ ಮೂಲವನ್ನು ತಿಳಿದುಕೊಳ್ಳಲು ಭೂವಿe್ಞÁನಿಗಳು ಅನೇಕ ಹವಳದ ದ್ವೀಪಗಳನ್ನು ಶೋಧನೆ ಮಾಡಿದ್ದಾರೆ. ಸುಮಾರು 1800'ಮೀ ವರೆಗೂ ಹವಳದ ಹುಳುಗಳಿಂದ ನಿರ್ಮಿತವಾದ ಭಾಗಗಳೇ ಕಂಡಿವೆ. ಹವಳದ ಹುಳುಗಳು 120' ಗಿಂತ ಹೆಚ್ಚು ಆಳದಲ್ಲಿ ಜೀವಿಸುವುದಿಲ್ಲವಾದುದರಿಂದ 1800'ಮೀ.ವರೆಗೂ ವ್ಯಾಪಿಸಿರುವ ಅಡಲುಗಳ ರಚನೆ ಭೂವಿಜ್ಞಾನದ ಸಮಸ್ಯೆಗಳಲ್ಲೊಂದೆನಿಸಿದೆ. ಬಹುಜನರಿಗೆ ಸಮರ್ಪಕವೆನಿಸಿದ ಡಾರ್ವಿನನ ವಾದದಂತೆ, ಪ್ರಾರಂಭದಲ್ಲಿ ಹವಳದ ಅಂಚುದಿಬ್ಬಗಳಾಗಿದ್ದು, ಅನಂತರ ತಡೆದಿಬ್ಬಗಳಾಗಿ ಮಾರ್ಪಟ್ಟು, ನೆಲ ನೀರಿನಡಿಯಲ್ಲಿ ಕುಸಿಯುತ್ತ ಹೋದಂತೆ ಹವಳದ ಗೂಡುಗಳು ಬೆಳೆಯುತ್ತ ಬಂದು ಅಡಲುಗಳು ನಿರ್ಮಾಣವಾದವೆಂದು ನಂಬಲಾಗಿದೆ.							   
  
(ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ